ಪ್ರೇಗಲ್, ಫ್ರಿಟ್ಸ್
1869-1930. ಆಸ್ಟ್ರಿಯದ ರಸಾಯನವಿಜ್ಞಾನಿ. ಆಸ್ಟ್ರಿಯದ ಲೈಬಾಕ್ ಎಂಬಲ್ಲಿ 1869 ಸೆಪ್ಟೆಂಬರ್ 3ರಂದು ಜನಿಸಿದ. ಪ್ರೇಗಲ್ ವೈದ್ಯವಿಜ್ಞಾನವನ್ನು ಗ್ರಾಜ್ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿದ. 1894ರಲ್ಲಿ ಎಂ.ಡಿ. ಪದವಿ ಪಡೆದ. ಇದಕ್ಕೂ ಮೊದಲು ಗ್ರಾಜ್ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ರಾಲೆಟನ ಮಾರ್ಗದರ್ಶನದಲ್ಲಿ ಶರೀರ ವಿಜ್ಞಾನದ ಮತ್ತು ಅಂಗಾಂಶವಿಜ್ಞಾನದ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ. ರಾಲೆಟನ ನಿಧನಾನಂತರ, 1903ರಲ್ಲಿ, ಆತನ ಸ್ಥಾನಕ್ಕೆ ಪ್ರೇಗಲ್ ಬಡ್ತಿ ಪಡೆದ. ಇದೇ ಸುಮಾರಿಗೆ ಪ್ರಾಧ್ಯಾಪಕ ಸ್ಕ್ರೌಪ್ ಎಂಬಾತನ ಮಾರ್ಗದರ್ಶನದಲ್ಲಿ ರಸಾಯನವಿಜ್ಞಾನದ ಎಲ್ಲ ವಿಭಾಗಗಳಲ್ಲೂ ಪ್ರಾವೀಣ್ಯಗಳಿಸಿದ. 1904ರಲ್ಲಿ ಜರ್ಮನಿಗೆ ಹೋಗಿ, ಕೆಲವು ದಿವಸ ಟ್ಯೂಬಿನ್‍ಜನ್ನಿನಲ್ಲಿ ಜಿ. ಹೂಫ್ನರನೊಡನೆಯೂ ಕೆಲವು ದಿನ ಲೈಪ್‍ಜಿಗ್‍ನಲ್ಲಿ ಡಬ್ಲ್ಯೂ. ಓಸ್ವವಾಲ್ಡನೊಡನೆಯೂ ಮುಂದೆ ಕೆಲವು ದಿನ ಬರ್ಲಿನ್ನಿನಲ್ಲಿ ಎಮಿಲ್ ಫಿಷರನೊಡನೆಯೂ ಕೆಲಸ ಮಾಡಿದ. ಪ್ರೇಗಲ್ 1905ರಲ್ಲಿ ಗ್ರಾಜ್ ವಿಶ್ವವಿದ್ಯಾಲಯಕ್ಕೆ ಮರಳಿ ಅಲ್ಲಿ ಕೆ.ಬಿ.ಹಾಫ್‍ಮನ್ನನೊಡನೆ ಔಷಧರಸಾಯನವಿಜ್ಞಾನ ಸಂಶೋಧನ ಸಂಸ್ಥೆ ಸೇರಿದ. ಅವನು ಈ ಅವಧಿಯಲ್ಲಿ ಸಸಾರಜನಕ ಪದಾರ್ಥಗಳಲ್ಲಿರುವ ವಿವಿಧ ಘಟಕಗಳ ಹಾಗೂ ಪಿತ್ತಾಮ್ಲಗಳ ವಿಶ್ಲೇಷಣೆಯ ಬಗ್ಗೆ ಸಂಶೋಧನೆ ನಡೆಸಿದ. ಈ ಸಂಶೋಧನೆಗಳಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಆರಂಭದ ಪದಾರ್ಥಗಳಾದ ಪಿತ್ತಾಮ್ಲ ಮುಂತಾದವನ್ನು ದೊರಕಿಸುವುದು ಬಲು ಕಠಿಣವಾಗಿತ್ತು. ಆದ್ದರಿಂದ ಅತಿ ಕಡಿಮೆ ಪ್ರಮಾಣದಲ್ಲಿರುವಾಗಲೂ ಈ ಪದಾರ್ಥಗಳಲ್ಲಿರುವ ಧಾತುಗಳ ಪರಿಮಾಣಾತ್ಮಕ ವಿಶ್ಲೇಷಣೆಯನ್ನು ಸಾಧ್ಯವಾಗಿರುವ ಇತರ ಸೂಕ್ಷ್ಮ ವಿಧಾನಗಳನ್ನು ಕುರಿತು ಯೋಚಿಸಬೇಕಾಯಿತು. ಈ ಕಾರಣದಿಂದ ಪ್ರೇಗಲ್ 1910-13ರಲ್ಲಿ ಇನ್ಸ್‍ಬ್ರುಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಕಾರ್ಬನಿಕ ಪದಾರ್ಥಗಳ ಪರಿಮಾಣಾತ್ಮಕ ಸೂಕ್ಷ್ಮ ವಿಶ್ಲೇಷಣೆಯ ಹೊಸ ವಿಧಾನಗಳನ್ನು ಯೋಜಿಸುವುದರಲ್ಲಿಯೇ ಮಗ್ನನಾದ. 1913ರಲ್ಲಿ ಗ್ರಾಜ್ ವಿಶ್ವವಿದ್ಯಾಲಯದ ಪ್ರಾರ್ಥನೆಯನ್ನು ಮನ್ನಿಸಿ ಪ್ರೇಗಲ್ ಪುನಃ ಅಲ್ಲಿಗೆ ಬಂದಮೇಲೂ ಇದೇ ಕಾರ್ಯವನ್ನು ಮುಂದುವರಿಸಿದ. ಈ ಸಂಶೋಧನೆಗಳ ಫಲವಾಗಿ 1913ರ ವೇಳೆಗೆ ಪ್ರೇಗಲ್ ಕೇವಲ 5ರಿಂದ 13 ಮಿಲಿಗ್ರಾಮುಗಳಷ್ಟು ಆರಂಭದ ಪದಾರ್ಥದಿಂದ ಅದರಲ್ಲಿರುವ ಇಂಗಾಲ ಜಲಜನಕ, ಸಾರಜನಕ, ಗಂಧಕ ಮತ್ತು ಹ್ಯಾಲೊಜನ್ನುಗಳ ಪರಿಮಾಣಾತ್ಮಕ ಪ್ರಮಾಣಗಳನ್ನು ಸ್ಥೂಲ ವಿಶ್ಲೇಷಣೆಯಿಂದ ಸಾಧಿಸಬಹುದಾದಷ್ಟು ನಿಖರತೆಯಲ್ಲಿಯೇ ನಿರ್ಧರಿಸಲು ಸಾಧ್ಯವಾಯಿತು. ಮುಂದೆ ಪ್ರೇಗಲ್ ಈ ವಿಧಾನವನ್ನು ಪರಿಪೂರ್ಣಗೊಳಿಸಿ ಕೇವಲ 3-5 ಮಿಲಿಗ್ರಾಮ್ ಪದಾರ್ಥದಿಂದ ಅದರಲ್ಲಿರುವ ಎಲ್ಲ ಧಾತುಗಳ ಪರಿಮಾಣಾತ್ಮಕ ಪ್ರಮಾಣಗಳನ್ನು ಅಷ್ಟೇ ನಿಖರತೆಯಿಂದ ನಿರ್ಧರಿಸಬಹುದೆಂದು ತೋರಿಸಿಕೊಟ್ಟ. ಇದಲ್ಲದೆ ಯಾವುದೇ ಕಾರ್ಬನಿಕ ಪದಾರ್ಥದಲ್ಲಿರುವ ಕೆಲವು ಪರಮಾಣು ಗುಂಪುಗಳ ಸೂಕ್ಷ್ಮ ವಿಶ್ಲೇಷಣೆಗೂ ವಿವಿಧ ವಿಧಾನಗಳನ್ನು ತೋರಿಸಿಕೊಟ್ಟ.

	ರಸಾಯನವಿಜ್ಞಾನದಲ್ಲಿ ಮೂಲಭೂತ ಸಂಶೋಧನೆ ನಡೆಸಿ, ಮುಖ್ಯವಾಗಿ ಪರಿಮಾಣಾತ್ಮಕ ಸೂಕ್ಷ್ಮ ವಿಶ್ಲೇಷಣೆಯ ತಂತ್ರವನ್ನು ರೂಪಿಸಿ ಕೀರ್ತಿಶಾಲಿಯಾದ ಪ್ರೇಗಲ್ಲನಿಗೆ 1923ರಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿತು. 1930 ಡಿಸೆಂಬರ್ 13ರಂದು ಈತ ಗತಿಸಿದ.
(ಕೆ.ಎಸ್.ಎಂಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ